ಉಳಿತಾಯ ಪತ್ರಗಳು

	ಸಣ್ಣ ಉಳಿತಾಯಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಮಾರಾಟ ಪತ್ರಗಳು (ಸೇವಿಂಗ್ ಸರ್ಟಿಫಿಕೇಟ್ಸ್). ಇವುಗಳ ಮೇಲೆ ನೀಡುವ ಬಡ್ಡಿಗೆ ಸಾಮಾನ್ಯವಾಗಿ ವರಮಾನ ತೆರಿಗೆಯಿಂದ ವಿನಾಯಿತಿ ಇರುತ್ತದೆ. ಇವನ್ನು ಸಣ್ಣ ಧನಮಾನಗಳಲ್ಲಿ ಮಾರಬಹುದು. ನಿಗದಿಯಾದ ವರ್ಷಗಳ ಅವಧಿ ಮುಗಿದ ಮೇಲೆ ಪತ್ರದ ಹಣವನ್ನು ಉಳಿತಾಯದಾರನಿಗೆ ಹಿಂದಿರುಗಿಸಲಾಗುತ್ತದೆ. ನಿರ್ಧರಿಸಲಾದ ದರದಲ್ಲಿ ಬಡ್ಡಿಯ ಹಣವನ್ನು ಪತ್ರದ ಅಸಲಿಗೆ ಸೇರಿಸಲಾಗುತ್ತದೆ. ಪತ್ರದ ನಿಗದಿಯಾದ ಅವಧಿಯವರೆಗೆ-ಅಥವಾ ಅದಕ್ಕಿಂತ ಮುಂಚೆ ಅದನ್ನು ಮುರಿಸಿ ನಗದು ಪಡೆಯುವವರಿಗೆ-ಬಡ್ಡಿಯುಂಟು. ಬ್ರಿಟನ್ನಿನಲ್ಲಿ ಪ್ರಪ್ರಥಮವಾಗಿ ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡಿದ್ದು ಒಂದನೆಯ ಮಹಾಯುದ್ಧದ ಕಾಲದಲ್ಲಿ (1916).

	ಭಾರತದಲ್ಲಿ 1917ರ ಏಪ್ರಿಲ್ ಒಂದರಂದು ಪ್ರಥಮವಾಗಿ 5 ವರ್ಷಗಳ ಕಚೇರಿ ನಗದು ಪತ್ರಗಳನ್ನು (ಪೋಸ್ಟ್ ಆಫೀಸ್ ಕ್ಯಾಷ್ ಸರ್ಟಿಫಿಕೇಟ್ಸ್) ನೀಡಲಾಯಿತು. ಬಡ್ಡಿಯದರ ಏರಿಸಿದಾಗ ಬೇಡಿಕೆ ಹೆಚ್ಚಿ, ಇಳಿಸಿದಾಗ ತಗ್ಗುತ್ತಿದ್ದ ಈ ಪತ್ರಗಳ ನೀಡಿಕೆ ಕೊನೆಗೊಂಡದ್ದು 1947ರಲ್ಲಿ. 1940ರಲ್ಲಿ ರಾಷ್ಟ್ರದ ರಕ್ಷಣೆಗಾಗಿ ಹಣದ ಅವಶ್ಯಕತೆ ಉಂಟಾದಾಗ ಸರ್ಕಾರ ರಕ್ಷಣಾ ಉಳಿತಾಯ ಪತ್ರಗಳನ್ನು ಜಾರಿಗೆ ತಂದಿತು. ಈ ಪತ್ರಗಳನ್ನು ನಗದು ಹಣಕ್ಕೆ ಪರಿವರ್ತಿಸಿಕೊಳ್ಳದಿರುವಂತೆ ಕಡ್ಡಾಯದ ಕಾಲದ ಮಿತಿ ಇರಲಿಲ್ಲ. 1ನೆಯ ಅಕ್ಟೋಬರ್ 1943ರಲ್ಲಿ ರಕ್ಷಣಾ ಉಳಿತಾಯ ಪತ್ರಗಳ ಬದಲು 12 ವರ್ಷದ ರಾಷ್ಟ್ರೀಯ ಉಳಿತಾಯ ಪತ್ರಗಳು ಜಾರಿಗೆ ಬಂದುವು. ಈ ಪತ್ರಗಳನ್ನು 3 ವರ್ಷಗಳವರೆಗೂ ನಗದಿಗೆ ಪರಿವರ್ತಿಸಲು ಅವಕಾಶವಿರಲಿಲ್ಲ. 5 ಮತ್ತು 7ವರ್ಷಗಳ ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಚಲಾವಣೆಗೆ ನೀಡಲಾದದ್ದು 1948ರಲ್ಲಿ. ಭಾರತದ ಅಭಿವೃದ್ಧಿಯೋಜನೆ ಪ್ರಾರಂಭವಾದ ಮೇಲೆ ಅದಕ್ಕಾಗಿ ಹಣ ಪಡೆಯಲು ನೀಡಿದವು ರಾಷ್ಟ್ರೀಯ ಯೋಜನಾ ಪತ್ರಗಳು.

	1970ರ ಮಾರ್ಚ್‍ನಲ್ಲಿ ಉಳಿತಾಯಪತ್ರಗಳ ಮಾರಾಟದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಯಿತು. ಹಿಂದೆ ನೀಡಲಾಗಿದ್ದ 12 ವರ್ಷಗಳ ರಾಷ್ಟ್ರೀಯ ರಕ್ಷಣಾ ಪತ್ರಗಳ, 10 ವರ್ಷಗಳ ರಕ್ಷಣಾ ಠೇವಣಿ ಪತ್ರಗಳ ಮತ್ತು 10 ವರ್ಷಗಳ ರಾಷ್ಟ್ರೀಯ ಉಳಿತಾಯ ಪತ್ರಗಳ ಮಾರಾಟ ರದ್ದುಗೊಳಿಸಿ ಅವುಗಳ ಬದಲು ವಿವಿಧ ಮೌಲ್ಯಗಳ ವಿವಿಧ ಬಡ್ಡಿ ದರಗಳ ಏಳು ವರ್ಷಗಳ ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡಲಾಯಿತು. ಒಂದು ಕನಿಷ್ಠ ಅವಧಿಯವರೆಗೆ ಇವನ್ನು ಮುರಿಸುವಂತಿಲ್ಲ. ಉಳಿತಾಯ ಪತ್ರಗಳ ಮಾರಾಟದಿಂದ ಬಂದ ಹಣವನ್ನು ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೂ ರಾಷ್ಟ್ರದ ರಕ್ಷಣಾಶಕ್ತಿಯನ್ನು ಹೆಚ್ಚಿಸುವುದಕ್ಕೂ ವೆಚ್ಚಮಾಡುತ್ತಿದೆ. 									 
  (ಎ.ಸಿ.ಆರ್.)